ಪಟೇಲ್, ವಲ್ಲಭ ಭಾಯಿ, ಜಾವೇರ್ ಭಾಯಿ
	1875-1950 ನಿಷ್ಣಾತ ನ್ಯಾಯವಾದಿ, ಸ್ವಾತಂತ್ರ್ಯ ಸಂಗ್ರಾಮದ ವೀರ ನಾಯಕರಲ್ಲೊಬ್ಬರು, ಚತುರ ರಾಜಕಾರಣಿ, ಸ್ವತಂತ್ರ್ಯ ಭಾರತದ ಉಪಪ್ರಧಾನಿಯಾಗಿದ್ದವರು. ಸರ್ದಾರ್ ಎಂದು ಪ್ರಖ್ಯಾತರಾಗಿರುವ ವಲ್ಲಭಭಾಯಿ ಜಾವೇರ್ ಭಾಯಿ ಪಟೇಲರ ತಂದೆ ಜಾವೇರ್ ಭಾಯಿ ಪಟೇಲ್ ; ತಾಯಿ ಲಾಡ ಬಾಯಿ. ಇವರು ತಾಯಿಯ ತವರಾದ ನಡಿಯಾದಲ್ಲಿ (ಗುಜರಾತ್) 1857ರ ಅಕ್ಟೋಬರ್ 31 ರಂದು ಜನಿಸಿದರು. ತಂದೆ ಜಾವೇರ್ ಭಾಯಿ ಪಟೇಲರು ಲೇವಾ ಪಾಟೀದಾರ ಮನೆತನದ ಸಾಮಾನ್ಯ ರೈತ. ಆವರು 1857ರ ಪ್ರಥಮ ಸ್ವಾತಂತ್ರ್ಯ ಸಮರದಲ್ಲಿ ಝಾನ್ಸಿಯ ರಾಣಿ ಲಕ್ಷ್ಮೀ ಬಾಯಿಯ ನೇತೃತ್ವದಲ್ಲಿ ಹೋರಾಡಿದ್ದರೆಂದೂ ಕೊನೆಯಲ್ಲಿ ಇಂದೋರಿನ ಮಲ್ಲಾರರಾವ್ ಹೋಳ್ಕರನಿಂದ ಸೆರೆಯಾಗಿ, ಚದುರಂಗದಾಟದ ಜಾಣ್ಮೆಯಿಂದ ಅವನ ಮನವೊಲಿಸಿಕೊಂಡು ಬಿಡುಗಡೆ ಹೊಂದಿದರೆಂದೂ ಅವನು ತನ್ನೊಂದಿಗೆ ಚದರುರಂಗವನ್ನಾಡಿಕೊಂಡಿರಬೇಕೆಂದು ಹೇಳಿದಾಗ ಅದಕ್ಕೊಪ್ಪದೆ ಮನೆಗೆ ಹಿಂದಿರುಗಿದರೆಂದೂ ಹೇಳಲಾಗಿದೆ. ಲಾಡಬಾಯಿ ಜಾವೇರ್ ಭಾಯಿಯ ಎರಡನೆಯ ಹೆಂಡತಿ. ಅವರ ಐದು ಗಂಡು ಒಂದು ಹೆಣ್ಣು ಮಕ್ಕಳ ಪೈಕಿ ವಲ್ಲಭ ಭಾಯಿ ನಾಲ್ಕನೆಯವರು. ಇವರ ಅಣ್ಣ ವಿಟ್ಠಲಭಾಯಿ ಪಟೇಲರು (ನೋಡಿ- ಪಟೇಲ್,-ವಿಟ್ಠಲ-ಭಾಯಿ,-ಜಾವೇರ್-ಭಾಯಿ) ಮೂರನೆಯವರು. ವಲ್ಲಭ ಭಾಯಿ ಪಟೇಲರು ಬಾಲ್ಯದಲ್ಲಿ ತಂದೆಗೆ ಬೇಸಾಯ ಗೋಪಾಲನೆಗಳಲ್ಲಿ ನೆರವಾಗುತ್ತಿದ್ದರು. ಇವರು ನೆಲವನ್ನು ನೇರವಾಗಿ ಆಳವಾಗಿ ಸಾಲು ಮಾಡಿ ಉಳುತ್ತಿದ್ದರು : ಗೋಪಾಲನೆಯಲ್ಲಿ ನುರಿತಿದ್ದರು. ಪಟೇಲರ ವಿದ್ಯಾಭ್ಯಾಸ ಆರಂಭವಾದ್ದು ತಡವಾಗಿ. ಮಾಧ್ಯಮಿಕ ಶಾಲಾ ಶಿಕ್ಷಣ ಮುಗಿಸಿದಾಗ ಇವರ ವಯಸ್ಸು ಸುಮಾರು 19. ಇವರು ನಡಿಯಾ ಪ್ರೌಢಶಾಲೆಯಿಂದ 1897ರಲ್ಲಿ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದರು. ವಿದ್ಯಾರ್ಥಿ ಜೀವನದಲ್ಲಿ ಇವರು ಮುಂದಾಳುತನದ ಎದೆಗಾರಿಕೆಯನ್ನು ಹಲವು ಬಾರಿ ತೋರಿಸಿದ್ದರು. ಪಟೇಲರು ಬಡೋದೆಯಲ್ಲಿಯ ಪ್ರೌಢಶಾಲೆಯನ್ನು ಸೇರಿದ ಕೆಲವೇ ದಿನಗಳಲ್ಲಿ ಅದನ್ನು ಬಿಡಲು ಅನ್ಯಾಯವನ್ನು ಸಹಿಸದಿರುವ ಇವರ ದಿಟ್ಟತನವೇ ಕಾರಣ. ಅನ್ಯಾಯವನ್ನು ಪ್ರತಿಭಟಿಸುವ ಧೈರ್ಯವನ್ನು ಇವರು ತಂದೆಯಿಂದಲೂ ಕಷ್ಟ ಸಹಿಷ್ಣುತೆಯನ್ನು ತಾಯಿಯಿಂದಲೂ ಪಡೆದರು. 

	ಪಟೇಲರದು ಬಡ ಮನೆತನವಾದ್ದರಿಂದ ಇವರು ಉಚ್ಚಶಿಕ್ಷಣ ಪಡೆಯುವುದು ಅಸಾಧ್ಯವಾಗಿತ್ತು. ನೌಕರಿ ಸೇರುವುದು ಇವರಿಗೆ ಇಷ್ಟವಿರಲಿಲ್ಲ. ಸ್ವತಂತ್ರವಾಗಿ ವಕೀಲಿ ಮಾಡುತ್ತಿದ್ದ ಅಣ್ಣನಂತೆಯೇ ಇವರೂ ವಕೀಲರಾಗಲಿಚ್ಛಿಸಿ ಸಾಮಾನ್ಯ ವಕೀಲಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ (1900) ಗೋಧ್ರಾದಲ್ಲಿ ವೃತ್ತಿ ಆರಂಭಿಸಿ ಯಶಸ್ಸುಗಳಿಸಿದರು. ಸ್ವಲ್ಪಕಾಲದ ಮೇಲೆ ಇವರು ಬೋರ್ಸದ್‍ನಲ್ಲಿ ವಕೀಲಿ ಮುಂದುವರಿಸಿದರು. ನ್ಯಾಯಾಲಯದಲ್ಲಿ ಒಂದರ ಹಿಂದೊಂದು ತಕ್ಸೀರಿನ ಪ್ರಕರಣದಲ್ಲಿ ಪೋಲೀಸರಿಗೆ ಸೋಲಾಗತೊಡಗಿದ್ದರಿಂದ ಇವರು ವಕೀಲಿ ನಡೆಸುತ್ತಿದ್ದ ಬೋರ್ಸದ್‍ನ ನ್ಯಾಯಾಲಯವನ್ನು ಎತ್ತಿ ಜಿಲ್ಲಾ ಕೇಂದ್ರವಾದ ಆನಂದಕ್ಕ್ಕೆ ಬದಲಾಯಿಸಲಾಯಿತು. ಪಟೇಲರು ಅಲ್ಲಿಗೂ ಹೋದರು. ಅಲ್ಲಿ ಇಡೀ ಜಿಲ್ಲೆಯ ಮೊಕದ್ದಮೆಗಳು ಪೋಲಿಸರಿಗೆ ವಿರುದ್ಧವಾಗಿ ಇತ್ಯರ್ಥವಾದುವು. ಇದರಿಂದ ಕೆಲವೇ ದಿನಗಳಲ್ಲಿ ನ್ಯಾಯಾಲಯವನ್ನು ಬೋರ್ಸದ್‍ಗೆ ವರ್ಗಾಯಿಸಲಾಯಿತು. ವಿದ್ಯಾರ್ಥಿಯಾಗಿ ಪಟೇಲರು ತೋರಿಸುತ್ತಿದ್ದ ದಿಟ್ಟತನ, ಅನ್ಯಾಯ ದರ್ಪಗಳಿಗೆ ತಲೆಬಾಗದ ಪ್ರವೃತ್ತಿ ಇವೇ ಇವರ ವಕೀಲಿ ವೃತ್ತಿಯಲ್ಲೂ ಪ್ರಕಟವಾದುವು. ಗರ್ವಿಷ್ಠ ಹಾಗೂ ಲಂಚಗುಳಿ ನ್ಯಾಯಾಧೀಶರಿಗೆ ಇವರು ಬುದ್ಧಿ ಕಲಿಸಿದ ಸಂದರ್ಭಗಳು ಅನೇಕ. ಆದರೆ ವೃತ್ತಿಯಲ್ಲಿ ಅವರೆಷ್ಟೇ ನಿಷ್ಣಾತರಾಗಿದ್ದರೂ ಸಾಮಾನ್ಯ ವಕೀಲಿ ಪರೀಕ್ಷೆಯನ್ನಷ್ಟೇ ಕೊಟ್ಟಿದುದ್ದು ಇವರಿಗೆ ಪ್ರತಿಬಂಧಕವಾಗಿತ್ತು. ಇವರ ಜೊತೆ ವಾದಿಸುವುದಕ್ಕೆ ಕಕ್ಷಿದಾರರು ಅಹಮದಾಬಾದಿನಿಂದ ಹೆಚ್ಚು ಹಣ ತೆತ್ತು ಬ್ಯಾರಿಸ್ಟರರನ್ನು ಕರೆತರುತ್ತಿದ್ದರು. ಅದರಿಂದ ಪಟೇಲರ ಸ್ವಾಭಿಮಾನಕ್ಕೆ ಮುಳ್ಳು ಚುಚ್ಚಿದಂತಾಗುತ್ತಿತ್ತು. ತಮಗಿಂತ ಮೊದಲು ತಮ್ಮ ಅಣ್ಣ ವಿಟ್ಠಲ ಭಾಯಿ ಪಟೇಲರು ಇಂಗ್ಲೆಂಡಿನಲ್ಲಿ ಬ್ಯಾರಿಸ್ಟರ್ ಪದವಿಗಾಗಿ ಹೋಗಿ ಬರಲು ಒಪ್ಪಿ ಅವರಿಗೆ ಹಣದ ನೆರವನ್ನು ಒದಗಿಸಿ ಅವರ ಕುಟುಂಬದ ಹೊಣೆ ಹೊತ್ತರು. 

	ಪಟೇಲರಿಗೆ ಮಣಿ ಬಹೆನ್ ಎಂಬ ಮಗಳೂ ದಾಹ್ಯಾ ಭಾಯಿ ಎಂಬ ಮಗನೂ ಹುಟ್ಟಿದರು. ಇವರ ಪತ್ನಿ 1909ರಲ್ಲಿ ಉದರವ್ಯಾಧಿಗಾಗಿ ಶಸ್ತ್ರ್ರಚಿಕಿತ್ಸೆಗೆ ಒಳಗಾಗಿ ಮೃತ ಹೊಂದಿದರು. ಆಕೆ ತೀರಿಕೊಂಡ ವಾರ್ತೆಯನ್ನು ಹೊತ್ತ ತಂತಿ ಪಟೇಲರ ಕೈಸೇರಿದಾಗ ಇವರು ಆನಂದದ ನ್ಯಾಯಲಯದಲ್ಲಿ ಒಂದು ಮೊಕದ್ದಮೆಯಲ್ಲಿ ಸಾಕ್ಷಿಯ ಪಾಟಿಸವಾಲು ನಡೆಸಿದ್ದರು. ತಂತಿಯನ್ನು ಓದಿ ಇವರು ಅಧೀರರಾಗಲಿಲ್ಲ. ಕಕ್ಷಿಗಾರನ ಹಿತಕ್ಕೆ ಧಕ್ಕೆ ಬಾರದಿರಲೆಂದು ಶಾಂತಚಿತ್ತದಿಂದ ಪಾಟಿಸವಾಲನ್ನು ಮುಂದುವರಿಸಿದರು.

	ಪಟೇಲರು 1910ರಲ್ಲಿ ಇಂಗ್ಲೆಂಡಿಗೆ ಹೋದರು. ಪ್ರಥಮ ಪರೀಕ್ಷೆಯಲ್ಲಿ ರೋಮನ್ ನ್ಯಾಯದಲ್ಲಿ ಪ್ರಥಮ ಸ್ಥಾನಗಳಿಸಿ ಬಹುಮಾನವನ್ನೂ ವಿದ್ಯಾರ್ಥಿವೇತನವನ್ನೂ ಪಡೆದರು. ಸಾಮಾನ್ಯವಾಗಿ ಮೂರು ವರ್ಷ ಹಿಡಿಯುವ ಬ್ಯಾರಿಸ್ಟರ್ ಪದವಿಯನ್ನು ಇವರು ಎರಡು ವರ್ಷಗಳಲ್ಲೇ ಗಳಿಸಿ ಭಾರತಕ್ಕೆ ಹಿಂದಿರುಗಿ ಅಹಮದಾಬಾದಿನಲ್ಲಿ ವೃತ್ತಿ ಆರಂಭಿಸಿದರು. ಯಶಸ್ಸು, ಧನ ಎರಡನ್ನೂ ಇವರು ಹೇರಳವಾಗಿ ಗಳಿಸಿದರು. ಪ್ರತ್ಯುತ್ಪನ್ನಮತಿ, ಮರ್ಮಜ್ಞಾನ ಮತ್ತು ವ್ಯವಹಾರಜ್ಞಾನ ಅಧಿಕವಾಗಿದ್ದ ಇವರಿಗೆ ಇದು ಕಷ್ಟವಾಗಲಿಲ್ಲ. ಕಾನೂನಿನ ಜಾಲದಲ್ಲಿ ಸಿಲುಕಿಕೊಂಡ ಅಶಿಕ್ಷಿತ ಕಕ್ಷಿಗಾರನ ಬಗ್ಗೆ ಇವರಿಗೆ ಕನಿಕರವಿರುತ್ತಿತ್ತು. ಇವರು ವಿದೇಶದಿಂದ ಹಿಂದಿರುಗುವಷ್ಟರಲ್ಲಿ ವಿಟ್ಠಲ ಭಾಯಿಯವರು ಸಾರ್ವಜನಿಕ ಜೀವನದಲ್ಲಿ ಕಾಲಿಟ್ಟು ಮುಂಬಯಿ ವಿಧಾನ ಸಭೆಯ ಸದಸ್ಯರಾಗಿದ್ದರು. ಅಣ್ಣ ತಮ್ಮ್ಮಂದಿರು ಪರಸ್ಪರ ವಿಚಾರ ವಿನಿಮಯ ಮಾಡಿಕೊಂಡು ಅಣ್ಣ ವಿಟ್ಠಲಬಾಯಿ ಪಟೇಲರು ವಿಧಾನ ಸಭೆ ಮತ್ತು ಸಾರ್ವಜನಿಕ ಕೆಲಸಗಳಿಗೆ ಪೂರ್ಣ ಸಮಯವನ್ನು ಮೀಸಲಾಗಿಡಬೇಕೆಂದೂ ತಮ್ಮ ವಲ್ಲಭಭಾಯಿ ಪಟೇಲರು ಕುಟುಂಬಗಳ ಹೊಣೆ ಹೊರಬೇಕೆಂದೂ ತೀರ್ಮಾನಕ್ಕೆ ಬಂದರು. ಆದರೆ ಈ ಪಾಲುದಾರಿಕೆ ಬಹಳ ಕಾಲ ನಡೆಯಲಿಲ್ಲ. ಪಟೇಲರು ಅಹಮದಾಬಾದಿಗೆ ಬಂದ ಎರಡು ವರ್ಷಗಳ ವೇಳೆಗೆ ಮಹಾತ್ಮ ಗಾಂಧಿಯವರು ಪ್ರಭಾವಕ್ಕೆ ಒಳಗಾಗಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದರು. 1917ರಲ್ಲಿ ಪ್ಲೇಗು ವ್ಯಾಧಿಯೂ 1918ರಲ್ಲಿ ಕ್ಷಾಮವೂ ತಲೆದೋರಿದಾಗ ಇವರು ಜನತೆಯ ಕಷ್ಟ ಪರಿಹಾರಕ್ಕಾಗಿ ಅವಿಶ್ರಾಂತರಾಗಿ ದುಡಿದರು.

	1917-1922ರಲ್ಲಿ ದೇಶದಲ್ಲಿ ಅನೇಕ ಆಂದೋಲನಗಳು ನಡೆದುವು. 1918ರಲ್ಲಿ ಬೆಳೆ ಬಾರದೆ ಕ್ಷಾಮ ತಲೆದೋರಿದ್ದರಿಂದ ಭೂಕಂದಾಯ ವಿನಾಯತಿಗಾಗಿ ಖೇಡಾ ಜಿಲ್ಲೆಯಲ್ಲಿ ಸತ್ಯಾಗ್ರಹ ನಡೆಯಿತು. ಸರ್ಕಾರ ರೈತರ ಚರಾಸ್ತಿಗಳನ್ನು ಜಫ್ತು ಮಾಡಿ ಪ್ರಜೆಗಳನ್ನು ಹಿಂಸಿಸಿತು. ಕೊನೆಯಲ್ಲಿ ಪಟೇಲರ ನೇತೃತ್ವದಲ್ಲಿ ಸತ್ಯಾಗ್ರಹ ಯಶಸ್ವಿಯಾಗಿ ಅಂತ್ಯಗೊಂಡಿತು. ವಲ್ಲಭ ಭಾಯಿಯ ಸಹಾಯ ಸಹಕಾರಗಳಿಲ್ಲದಿದ್ದರೆ ಅದು ಅಷ್ಟು ಯಶಸ್ವಿಯಾಗುತ್ತಿರಲಿಲ್ಲವೆಂದು ಗಾಂಧಿಯವರು ಇವರನ್ನು ಹೊಗಳಿದರು. ವೈಯಕ್ತಿಕ ಸ್ವಾತಂತ್ರ್ಯಗಳನ್ನು ಮೊಟಕುಗೊಳಿಸುವ ರೌಲಟ್ ಅಧಿನಿಯಮ ಜಾರಿಗೆ ಬಂದಾಗ 1919ರಲ್ಲಿ ಮತ್ತೆ ಆಂದೋಲನ ನಡೆಯಿತು. ಅಹಮದಾಬಾದಿನಲ್ಲಿ ಬಂಡಾಯವೆದ್ದಿತು. ಖೇಡಾ ಸತ್ಯಾಗ್ರಹ ನಡೆದಾಗಲೇ ಪಟೇಲರು ವಕೀಲಿಯನ್ನು ಬಿಟ್ಟಂತಾಗಿತ್ತು. ರೈಲು ಕಂಬಿ ಕಿತ್ತರೆಂದು ಕೆಲವರನ್ನು ಸರ್ಕಾರ ಸೆರೆಹಿಡಿದಾಗ ಅವರ ಬಿಡುಗಡೆಗಾಗಿ ಪಟೇಲರು ನ್ಯಾಯಾಲಯದಲ್ಲಿ ವಾದಿಸಿದರು. ಇದೇ ಇವರ ವೃತ್ತಿಯ ಕೊನೆಯಾಯಿತು. ಅನಂತರ ಪಂಜಾಬಿನಲ್ಲಿ ಕಿಲಾಫತ್ ಚಳವಳಿ ಪ್ರಾರಂಭವಾಯಿತು. ಸರ್ಕಾರದಿಂದ ಸಾಮೂಹಿಕ ಹತ್ಯೆ ದಬ್ಬಾಳಿಕೆ ಅತ್ಯಾಚಾರಗಳು ನಡೆದುವು. ಪಟೇಲರು ತಮ್ಮ ಸಮಯವನ್ನು ರಾಜಕೀಯ ಮತ್ತು ರಚನಾತ್ಮಕ ಕಾರ್ಯಗಳಿಗೆ ಮೀಸಲಾಗಿಟ್ಟು ಹಳ್ಳಿಹಳ್ಳಿಗಳಲ್ಲಿ ಸುತ್ತಿ ಪ್ರಚಾರ ಭಾಷಣಗಳನ್ನು ಮಾಡಿದರು. ವಿದೇಶಿ ಬಟ್ಟೆಗಳ ಮತ್ತು ಮದ್ಯದ ಅಂಗಡಿಗಳ ಮುಂದೆ ಮುಷ್ಕರಗಳನ್ನು ನಡೆಸಿದರು. 1921ರಲ್ಲಿ ಖಾದಿಯನ್ನು ತೊಟ್ಟರು. ಅನಂತರ ಕೊನೆಯವರೆಗೂ ಖಾದಿಯೇ ಇವರ ಉಡುಪಾಯಿತು. 1921ರಲ್ಲಿ ಅಹಮದಾಬಾದಿನಲ್ಲಿ ಕಾಂಗ್ರಸ್ ಅಧಿವೇಶನ ನಡೆದಾಗ ಪಟೇಲರು ಅದರ ಸ್ವಾಗತ ಸಮಿತಿಯ ಅಧ್ಯಕ್ಷರಾಗಿದ್ದರು.

	ಮುಂದೆ ಮತ್ತೊಂದು ಚಳವಳಿ ನಡೆಯಿತು. ನಾಗಪುರದಲ್ಲಿ ಕಾಂಗ್ರೆಸ್ ಸ್ವಯಂ ಸೇವಕರು ಮೆರವಣಿಗೆಯಲ್ಲಿ ಹೋಗುತ್ತಿದ್ದಾಗ ಪೋಲೀಸರು ರಾಷ್ಟ್ರಧ್ವಜವನ್ನು ಕಿತ್ತು ಕೊಂಡಿದ್ದರಿಂದ ಪ್ರಾರಂಭವಾದ ಆಂದೋಲನ ಅಖಿಲ ಭಾರತ ಸ್ವರೂಪ ತಾಳಿತು. ಇದರ ಮುಂದಾಳಾಗಿದ್ದ ಸೇಠ್ ಜಮನಾಲಾಲ್ ಬಜಾಜರು ಸೆರಮನೆ ಸೇರಿದಾಗ ಪಟೇಲು ನಾಯಕತ್ವ ವಹಿಸಿಕೊಂಡರು. ಈ ಆಂದೋಲನವೂ ಯಶಸ್ವಿಯಾಗಿ, ಇವರ ಕೀರ್ತಿ ಹೆಚ್ಚಿತು. ಅಷ್ಟರಲ್ಲಿ ಬೋರ್ಸದದ ಸತ್ಯಾಗ್ರಹ ಪ್ರಾರಂಭವಾಯಿತು. ಬಾಬರ್‍ದೇವ ಎಂಬ ದರೋಡೆಕೋರನ ಹಾವಳಿ ತಾಲ್ಲೂಕಿನಲ್ಲಿ ಹೆಚ್ಚಿತ್ತು. ಜನರು ಅವನಿಗೆ ಆಸರೆ ಕೊಡುತ್ತಿದ್ದಾರೆಂಬ ನೆಪದಿಂದ ಸರ್ಕಾರ ಆ ತಾಲ್ಲೂಕಿನ ಮೇಲೆ 2 ಲಕ್ಷ 40 ಸಾವಿರ ರೂಪಾಯಿಗಳ ಸಾಮೂಹಿಕ ಜುಲ್ಮಾನೆ ಹೇರಿತು. ಬಾಬರ್‍ದೇವನನ್ನು ಹಿಡಿಯಲು ಸರ್ಕಾರ ಒಬ್ಬ ಮುಸಲ್ಮಾನ ಮುಖಂಡನನ್ನು ನೇಮಿಸಿ ಅವನಿಗೆ ಶಸ್ತ್ರಾಸ್ತ್ರ್ರಗಳನ್ನು ಕೊಟ್ಟಿದ್ದದು ಬೋರ್ಸದಕ್ಕೆ ಬಂದಾಗ ಪಟೇಲರಿಗೆ ತಿಳಿಯಿತು. ಆತನೇ ದರೋಡೆ ಸುಲಿಗೆಗಳನ್ನು ಮಾಡುತ್ತ ಬಾಬರ್‍ದೇವನನ್ನೂ ಮೀರಿಸಿದ್ದ. ಪಟೇಲರು ಅದಕ್ಕಾಗಿ ಸರ್ಕಾರವನ್ನು ಟೀಕಿಸಿ ಭಾಷಣಗಳನ್ನು ಮಾಡುತ್ತ ತಾಲ್ಲೂಕಿನ ಊರುಗಳನ್ನು ಸುತ್ತಿದರು. ಕೊನೆಗೆ ಗೃಹಮಂತ್ರಿಯಿಂದ ವಿಚಾರಣೆ ನಡೆದು, ಊರಿನ ಮೇಲೆ ವಿಧಿಸಿದ್ದ ತಪ್ಪುದಂಡ ರದ್ದಾಯಿತು. ಪಟೇಲರು 2,000 ಸ್ವಯಂಸೇವಕರನ್ನು ಕೂಡಿಸಿ ತಾಲ್ಲೂಕಿನ ಬಂದೋಬಸ್ತಿನ ಕಾರ್ಯಕ್ಕೆ ನೇಮಿಸಿದಾಗ ಬಾಬರ್‍ದೇವ ಪತ್ತೆಯಿಲ್ಲದೆ ಅಡಗಿ ಹೋದ.

	1924-1928 ರಲ್ಲಿ ಪಟೇಲರು ಅಹಮದಾಬಾದ್ ನಗರಸಭೆಯ ಚುನಾಯಿತ ಅಧ್ಯಕ್ಷರಾದರು. ಇವರ ಸ್ನೇಹಿತರಾಗಿದ್ದ ಹರಿಪ್ರಸಾದರ ನೇತೃತ್ವದಲ್ಲಿ ಇವರು ಸ್ವಯಂಸೇವಕರ ತಂಡವನ್ನು ಕಟ್ಟಿದರು. ಆ ತಂಡ ನಗರದ ಸಂದಿಗೊಂದಿಗಳನ್ನು ಸ್ವಚ್ಛಮಾಡುವ ಕೆಲಸದಲ್ಲಿ ನಿರತವಾಯಿತು. 1927ರ ಮಳೆಗಾಲದಲ್ಲಿ ಅತಿವೃಷ್ಟಿಯಿಂದ ಪ್ರಳಯವುಂಟಾಗಿ ಪ್ರಾಂತ್ಯವೆಲ್ಲ ನೀರಿನಲ್ಲಿ ಮುಳುಗಿ ಹಳ್ಳಿಗಳು ಮಾಯವಾದುವು. ಲಕ್ಷಾಂತರ ಜನರಿಗೆ ಮನೆಮಾರು ಇಲ್ಲವಾಯಿತು. ಪಟೇಲರು ಅಹಮದಾಬಾದಿನ ರಕ್ಷಣೆಗಾಗಿ ಹಗಲುರಾತ್ರಿ ದುಡಿದರು. ಸ್ವಯಂಸೇವಕರನ್ನು ಕೂಡಿಹಾಕಿ ದುಃಖನಿವಾರಣಾ ಸಮಿತಿಯನ್ನು ಕಟ್ಟಿದರು. ಕೊನೆಯಲ್ಲಿ ಸರ್ಕಾರ ಕ್ಷಾಮ ನಿವಾರಣಾ ನಿಧಿಯಿಂದ ಪರಿಹಾರಧನ ನೀಡಿತು. ಅದೇ ವರ್ಷ ಬಾರ್ಡೋಲಿ ಸತ್ಯಾಗ್ರಹ ನಡೆಯಿತು. ಸರ್ಕಾರ ತಾಲ್ಲೂಕಿನಲ್ಲಿ ಭೂಕಂದಾಯವನ್ನು ವಿಪರೀತವಾಗಿ ಏರಿಸಿದ್ದು ಅದಕ್ಕೆ ಮೂಲ ಕಾರಣ. ಇದನ್ನು ನಿಲ್ಲಿಸಲು ಕೈಗೊಂಡ ಉಪಾಯಗಳು ವಿಫಲಗೊಂಡಿದ್ದರಿಂದ ಕೃಷಿಕರು 1928ರ ಫೆಬ್ರವರಿ 12ರಂದು ಪಟೇಲರ ಅಧ್ಯಕ್ಷತೆಯಲ್ಲಿ ಸಭೆ ಸೇರಿದರು. ಕಂದಾಯ ಕೊಡಬಾರದೆಂದು ನಿರ್ಣಯವಾಯಿತು. ಸರ್ಕಾರಕಂದಾಯ ವಸೂಲಿಗಾಗಿ ಉಗ್ರಕ್ರಮಗಳನ್ನು ಕೈಗೊಂಡಿತು. ದನಕರು, ಹೊಲ ಮನೆ ಜಫ್ತಾದವು. ಅವುಗಳ ಹರಾಜು ನಡೆಯಿತು. ಆದರೆ ಕೊಳ್ಳುವವರೇ ಇರಲಿಲ್ಲ. ಹಲವರು ದನಕರುಗಳನ್ನು ಮನೆಯೊಳಗೇ ಇಟ್ಟುಕೊಂಡು ಬಾಗಿಲು ಮುಚ್ಚಿ ಕಾಲ ಕಳೆದರು. ಆಂದೋಲನ ತೀವ್ರವಾಗಿ ಇಡೀ ದೇಶದ ಗಮನ ಸೆಳೆಯಿತು. ಗ್ರಾಮ ನೌಕರರು ತಮ್ಮ ಕೆಲಸಗಳಿಗೆ ರಾಜಿನಾಮೆಯಿತ್ತರು. ಪಟೇಲರು ದಿನವೂ 8-10 ಹಳ್ಳಿಗಳಲ್ಲಿ ಸುತ್ತಾಡಿ ಜನರಿಗೆ ಪ್ರೋತ್ಸಾಹ ನೀಡುತ್ತಿದ್ದರು. ಮಹಿಳೆಯರನ್ನು ಹುರಿದುಂಬಿಸಿ, ಅವರೂ ಚಳವಳಿಯಲ್ಲಿ ಭಾಗವಹಿಸುವಂತೆ ಮಾಡಿದರು. ಬಾರ್ಡೋಲಿಯಲ್ಲಿ ಪ್ರತಿ ಸರ್ಕಾರ ಏರ್ಪಟ್ಟಿತು. ಮುಂಬಯಿಯ ವಿಧಾನ ಸಭೆಗೆ ಕೆಲವು ಸದಸ್ಯರು ರಾಜಿನಾಮೆ ಕೊಟ್ಟರು. ದಿಲ್ಲಿಯ ವಿಧಾನಸಭೆಯ ಅಧ್ಯಕ್ಷರಾಗಿದ್ದ ವಿಟ್ಠಲ ಭಾಯಿಯವರು ಬಾರ್ಡೋಲಿಯ ಸಮಸ್ಯೆ ತೃಪ್ತಿಕರವಾದ ರೀತಿಯಲ್ಲಿ ಇತ್ಯರ್ಥವಾಗದಿದ್ದಲ್ಲಿ ರಾಜಿನಾಮೆ ನೀಡಿ ಸತ್ಯಾಗ್ರಹದಲ್ಲಿ ಪಾಲುಗೊಳ್ಳುವುದಾಗಿ ಬೆದರಿಕೆ ಹಾಕಿದರು. ಕೊನೆಗೆ ಸರ್ಕಾರ ವಲ್ಲಭಭಾಯಿಯವರೊಂದಿಗೆ ಒಪ್ಪಂದಕ್ಕೆ ಬಂತು. ವಿಚಾರಣೆ ನಡೆದು ಕಂದಾಯದ ಏರಿಕೆಯನ್ನು ಮುಂದೂಡಲಾಯಿತು. ಜಫ್ತಾಗಿದ್ದ ಆಸ್ತಿಯನ್ನು ಜನರಿಗೆ ಹಿಂದಿರುಗಿಸಲಾಯಿತು. ಹೋಗಿದ್ದ ನೌಕರಿಗಳು ತಿರುಗಿ ದೊರೆತುವು. ಇದರಿಂದ 80,000 ರೈತರಿಗೆ ನೆಮ್ಮದಿ ಉಂಟಾಯಿತು. ದೇಶ ಕೃತಜ್ಞತೆಯಿಂದ ಪಟೇಲರಿಗೆ ಸರ್ದಾರ ಎಂಬ ಬಿರುದನ್ನಿತ್ತಿತು. ಆ ಬಿರುದು ಇವರಿಗೆ ಶಾಶ್ವತವಾಗಿ ನಿಂತಿತು.

	ಆ ಸಮಯಕ್ಕೆ ದೇಶದಲ್ಲಿ ರಾಜಕೀಯ ಪರಿಸ್ಥಿತಿ ಗಂಭೀರವಾಗಿತ್ತು. ಬಾರ್ಡೋಲಿಯ ಗೆಲುವಿನಿಂದ ಭಾರತ ಸ್ವಾತಂತ್ರ್ಯದ ಚಳವಳಿಗೆ ಅಪಾರ ಪುಷ್ಟಿ ದೊರೆಯಿತು. ಸರ್ದಾರರು ದಕ್ಷಿಣ ಭಾರತ ಪ್ರವಾಸ ಕೈಗೊಂಡು ತಮ್ಮ ವ್ಯಕ್ತಿತ್ವದಿಂದ ಜನರನ್ನು ಹುರಿದುಂಬಿಸಿದರು. ಜನರಲ್ಲಿ ಸ್ವರಾಜ್ಯದ ಹಂಬಲ ಬೆಳೆಯಿತು. ಬ್ರಿಟಿಸ್ ಸರ್ಕಾರ ನೇಮಿಸಿದ್ದ ಸೈಮನ್ ಆಯೋಗವನ್ನು ಭಾರತ ಧಿಕ್ಕರಿಸಿತು. ಒಂದು ವರ್ಷದೊಳಗೆ ಸ್ವರಾಜ್ಯ ದೊರಕಿಸಲೇಬೇಕು ಎಂಬ ಠರಾವನ್ನು ಕಲ್ಕತ್ತೆಯ ಕಾಂಗ್ರೆಸ್ಸು ಸ್ವೀಕರಿಸಿತು. ಆದರೆ ಒಂದು ವರ್ಷ ಕಳೆದರೂ ಬ್ರಿಟಿಷ್ ಸರ್ಕಾರ ಏನನ್ನೂ ಮಾಡಲಿಲ್ಲ. 1929ರ ಲಾಹೋರಿನ ಅಧಿವೇಶನದಲ್ಲಿ ಕಾಂಗ್ರೆಸ್ಸು ಪೂರ್ಣ ಸ್ವಾತಂತ್ರ್ಯವೇ ದೇಶದ ಗುರಿಯೆಂದು ಸಾರಿತು. ಸವಿನಯ ಶಾಸನೋಲ್ಲಂಘನವೇ ಸತ್ಯಾಗ್ರಹದ ದಾರಿಯೆಂದು ತೀರ್ಮಾನವಾಯಿತು.

	1939ರ ಮಾರ್ಚಿಯಲ್ಲಿ ಗಾಂಧೀಜಿ ಉಪ್ಪಿನ ಅನ್ಯಾಯದ ಕಾನೂನನ್ನು ಮುರಿಯಲು ನಿರ್ಧರಿಸಿದರು. 12 ರಂದು ಇದಕ್ಕಾಗಿ ಇವರು ದಂಡಿಗೆ ಹೋಗಲು ನಿಶ್ಚಯಿಸಿದರು. ಅದರ ಪೂರ್ವಸನ್ನಾಹದ ಭಾರ ಸರ್ದಾರರ ಮೇಲೆ ಬಿತ್ತು. ಪಟೇಲರು ಹಳ್ಳಿ ಹಳ್ಳಿಗೆ ಹೋಗಿ ಭಾಷಣ ಮಡಿದರು. 7 ರಂದು ಖೇಡಾ ಜಿಲ್ಲೆಯ ರಾಸ್ ಎಂಬ ಹಳ್ಳಿಯಲ್ಲಿ ಇವರು ಭಾಷಣ ಮಾಡಕೂಡದೆಂಬ ಸರ್ಕಾರದ ಆಜ್ಞೆಯನ್ನು ಉಲ್ಲಂಘಿಸಿದಾಗ ಸರ್ಕಾರ ಇವರನ್ನು ದಸ್ತಗಿರಿ ಮಾಡಿ ಇವರಿಗೆ ಮೂರು ತಿಂಗಳ ಕಾರಾಗೃಹ ಶಿಕ್ಷೆ ಮತ್ತು 500 ರೂ. ಜುಲ್ಮಾನೆ ವಿದಿಸಿತು. ಜೂನ್ 2ರಂದು ಇವರ ಬಿಡುಗಡೆಯಾಯಿತು. ಆ ವೇಳೆಗೆ ರಾಷ್ಟ್ರ ನೇತಾ ಮೋತಿಲಾಲ್ ನೆಹ್ರೂ ಅವರನ್ನು ಸರ್ಕಾರ ಬಂಧಿಸಿತ್ತು. ಅವರು ತಮ್ಮ ಸ್ಥಾನದಲ್ಲಿ ಪಟೇಲರನ್ನು ನೇಮಿಸಿದರು. ಇಡೀ ಭಾರತಕ್ಕೆ ಪಟೇಲರು ಸತ್ಯಾಗ್ರಹ ಸಂಚಾಲಕರಾದರು. ಮನೆ ಮನೆಯೂ ಕಾಂಗ್ರೆಸ್ ಕಛೇರಿಯಾಗಿಲಿ, ಪ್ರತಿಯೊಬ್ಬನೂ ಕಾಂಗ್ರಸ್ ಆಗಲಿ ಎಂದು ಇವರು ಘೋಷಿಸಿ, ಜನರು ಕಂದಾಯ ಕೊಡುವುದನ್ನು ನಿಲ್ಲಿಸಬೇಕೆಂದು ಬೋಧಿಸಿದರು. ಆಗಸ್ಟ್‍ನಲ್ಲಿ ಮದನಮೋಹನ ಮಾಲವೀಯ ಮೊದಲಾದ ನಾಯಕರೊಂದಿಗೆ ಸರ್ದಾರರನ್ನೂ ಸರ್ಕಾರ ಬಂಧಿಸಿತು. ಇವರಿಗೆ ಮೂರು ತಿಂಗಳ ಕಠಿಣ ಶಿಕ್ಷೆ ವಿಧಿಸಲಾಯಿತು. ನವೆಂಬರ್‍ನಲ್ಲಿ ಇವರು ಬಿಡುಗಡೆಯಾದೊಡನೆಯೇ ಸತ್ಯಾಗ್ರಹ ಮುಂದವರಿಸಿದರು. ಇವರು ಎಂದೋ ಎಲ್ಲೋ ಖಾದಿ ಪ್ರದರ್ಶನ ತೆರೆದಾಗ ಮಾಡಿದ್ದ ಹಳೆಯ ಭಾಷಣಕ್ಕಾಗಿ ಇವರನ್ನು ಸರ್ಕಾರ ಮತ್ತೆ ಬಂಧಿಸಿತು. ಇವರಿಗೆ ಆರು ತಿಂಗಳ ಶಿಕ್ಷೆ ಆಯಿತು. ಪಟೇಲರು ಹೀಗೆ 10 ತಿಂಗಳುಗಳಲ್ಲಿ ಮೂರು ಸಲ ಜೈಲು ಕಂಡರು. ಮೂರನೆಯ ಸಲ ಅವರು ಬಹಳ ದಿನ ಜೈಲಿನಲ್ಲಿರಲಿಲ್ಲ. ಗಾಂಧಿ ಇರ್ವಿನ್ ಒಪ್ಪಂದವಾದಾಗ ಇವರ ಬಿಡುಗೆಯಾಯಿತು.

	1931ರ ಮಾರ್ಚಿ 26 ರಂದು ಕರಾಚಿಯಲ್ಲಿ ನಡೆದ 46ನೆಯ ಕಾಂಗ್ರೆಸ್ ಅಧಿವೇಶನಕ್ಕೆ ಪಟೇಲರು ಅಧ್ಯಕ್ಷರಾಗಿದ್ದರು. ಆದರೆ ಅದೇ ಸಮಯಕ್ಕೆ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಎಂಬ ವಿಪ್ಲವವಾದಿ ತರುಣರನ್ನು ಸರ್ಕಾರ ಗಲ್ಲಿಗೇರಿಸಿದರಿಂದ ಅಧಿವೇಶನದ ಮೇಲೆ ದುಃಖದ ಮೋಡ ಕವಿದಿತ್ತು. ಜವಾಹರ ಲಾಲ್ ನೆಹ್ರೂ, ಸುಭಾಸ್ ಚಂದ್ರ ಬೋಸ್ ಮೊದಲಾದ ತರುಣ ನಾಯಕರಿಗೆ ಗಾಂಧೀ-ಅರ್ವಿನ್ ಒಪ್ಪಂದ ಸಮಾಧಾನಕರವಾಗಿರಲಿಲ್ಲ. ಆದರೂ ಕಾಂಗ್ರೆಸ್ಸು ಕೊನೆಯಲ್ಲಿ ಆ ಒಪ್ಪಂದಕ್ಕೆ ತನ್ನ ಒಪ್ಪಿಗೆಯ ಮುದ್ರೆಯನ್ನೊತ್ತಿದ್ದರಿಂದ ಅಸಹಕಾರ ಚಳವಳಿ ನಿಂತಿತು. ರಾಜಕೀಯ ಕೈದಿಗಳ ಬಿಡುಗಡೆಯಾಗಿ ಗಾಂಧೀಜಿ ದುಂಡು ಮೇಜಿನ ಪರಿಷತ್ತಿನಲ್ಲಿ ಭಾಗವಹಿಸುವಂತಾಯಿತು. ಆದರೆ ಪರಿಷತ್ತು ವಿಫಲವಾಯಿತು. ಮತ್ತೆ ಎಲ್ಲ ದೇಶನಾಯಕರ ದಸ್ತಗಿರಿಯಾಯಿತು. ಗಾಂಧೀಜಿ ಮತ್ತು ಸರ್ದಾರರು 1932ರ ಜನವರಿಯಿಂದ 1933ರ ಮೇ ವರೆಗೆ ಯರವಾಡ ಜೈಲಿನಲ್ಲಿ ಬಂಧಿತರಾಗಿದ್ದರು.

	1935ರ ಭಾರತ ಸರ್ಕಾರ ಅಧಿನಿಯಮ ಜಾರಿಯಲ್ಲಿ ಬಂದ ಮೇಲೆ ಕಾಂಗ್ರೆಸ್ಸು ಪ್ರಾಂತೀಯ ಶಾಸನ ಸಭೆಗಳಿಗೆ ಸ್ಪರ್ಧಿಸಲು ನಿರ್ಧರಿಸಿತು. 1936ರಲ್ಲಿ ನಡೆದ ಚುನಾವಣೆಗಳಲ್ಲಿ ಭಾರತದ 11 ಪ್ರಾಂತ್ಯಗಳ ಪೈಕಿ 7 ರಲ್ಲಿ ಕಾಂಗ್ರೆಸ್ಸಿಗೆ ಬಹುಮತ ದೊರೆಯಿತು. ಆ ಪ್ರಾಂತಗಳಲ್ಲಿ ಕಾಂಗ್ರೆಸ್ ಮಂತ್ರಿ ಮಂಡಲಗಳು ಸ್ಥಾಪಿತವಾದುವು. ಕಾಂಗ್ರಸ್ ವಿಧಾನ ಸಭ ಉಪಸಮಿತಿಯ ಅಧ್ಯಿಕ್ಷರಾಗಿದ್ದ ಸರ್ದಾರರು ಈ ಮಂತ್ರಿ ಮಂಡಲಗಳ ಚಟುವಟಿಕೆಗಳಿಗೆ ಮಾರ್ಗದರ್ಶಕರೂ ನಿಯಂತ್ರಕರೂ ಆಗಿದ್ದರು.

	ಬ್ರಿಟನ್ 1939ರ ಸೆಪ್ಟಂಬರ್ 3 ರಂದು ಜರ್ಮನಿಯ ಮೇಲೆ ಯುದ್ಧ ಘೋಷಿಸಿದಾಗ ಭಾರತವೂ ಯುದ್ಧದಲ್ಲಿ ಬ್ರಿಟನ್ನಿನ ಮಿತ್ರರಾಷ್ಟ್ರದಂತೆ ಭಾಗವಹಿಸುವುದಾಗಿ ಭಾರತದ ವೈಸ್ರಾಯ್ ಕೇಂದ್ರ ಪ್ರಾಂತ್ಯಗಳ ವಿಧಾನಸಭೆಗಳ ಸಲಹೆ ಕೇಳದೆಯೇ ಸಾರಿದರು. ಕಾಂಗ್ರೆಸ್ಸಿಗೆ ಇದು ಒಪ್ಪಿಗೆಯಾಗಲಿಲ್ಲ. ಮಂತ್ರಿಮಂಡಲಗಳು ರಾಜೀನಾಮೆಯಿತ್ತುವು. ಭಾರತ ಆ ಯುದ್ಧದಲ್ಲಿ ಭಾಗಿಯಾಗುವುದನ್ನು ಗಾಂಧಿಯವರು ವಿರೋಧಿಸಿ ವೈಯಕ್ತಿಕ ಸತ್ಯಾಗ್ರಹವನ್ನು ಪ್ರಾರಂಭಿಸಿದರು. ನಾಯಕರು ಜೈಲಿಗೆ ಹೋಗತೊಡಗಿದರು. 1940ರ ನವೆಂಬರ್ 17ರಂದು ಸರ್ದಾರರು ದಸ್ತಗಿರಿಯಾಗಿ, 1941ರ ಆಗಸ್ಟ್ 20ರಂದು ಅಸ್ವಸ್ಥತೆಯ ಕಾರಣ ಬಿಡುಗಡ ಹೊಂದಿದರು. ಬ್ರಿಟಿಷರು ಭಾರತವನ್ನು ಬಿಟ್ಟು ತೊಲಗಬೇಕೆಂಬ ಗೊತ್ತುವಳಿಯನ್ನು 1942ರ ಆಗಸ್ಟ್ 8 ರಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿ ಅಂಗೀಕರಿಸಿದಾಗ, ಸರ್ಕಾರ ಸರ್ದಾರರನ್ನೂ ಸಮಿತಿಯ ಇತರ ಸದಸ್ಯರನ್ನೂ ಬಂಧಿಸಿ ಅಹಮ್ಮದನಗರದ ಹಳೆಯ ಕಿಲ್ಲೆಯಲ್ಲಿ ಇಟ್ಟಿತು. ಪಟೇಲರು ಸುಮಾರು 3 ವರ್ಷಗಳ ಕಾಲ ಬಂಧನದಲ್ಲಿದ್ದರು.

	ಯುದ್ದಾಂತ್ಯದಲ್ಲಿ ಕಾಂಗ್ರೆಸ್ ನಾಯಕರ ಬಿಡುಗಡೆಯಾಗಿ, ಬ್ರಿಟಷ್ ಸರ್ಕಾರ ಭಾರತದ ಸ್ವಾತಂತ್ರ್ಯದ ಸಮಸ್ಯೆಗೆ ಶಾಂತಿಯುತ ಸಂವಿಧಾನಾತ್ಮಕ ಪರಿಹಾರವನ್ನು ಕಂಡು ಹಿಡಿಯಲು ನಿರ್ಧರಿಸಿದಾಗ ಸರ್ದಾರರು ಕಾಂಗ್ರೆಸ್ಸಿನ ಮುಖ್ಯ ವಕ್ತಾರರಲ್ಲೊಬ್ಬರಾಗಿದ್ದರು. 1946ರ ಸೆಪ್ಟಂಬರ್ 2 ರಂದು ತಾತ್ಕಾಲಿಕ ಸರ್ಕಾರ ಸ್ಥಾಪಿತವಾದ ಇವರು ಪೋಲಿಸ್ ಇಲಾಖೆಯ ಮಂತ್ರಿ ಆದರು. ಸ್ವಾತಂತ್ರ್ಯ ಬಂದ ಮೇಲೆ ಉಪಪ್ರಧಾನಿಯಾಗಿ ಗೃಹ, ದೇಶೀಯ ಸಂಸ್ಥಾನ ಸಮಾಚಾರ ಮತ್ತು ನಿಸ್ತಂತು ವಿಸ್ತರಣ ಇಲಾಖೆಗಳನ್ನು ವಹಿಸಿಕೊಂಡರು. ಈ ಸಂದರ್ಭದಲ್ಲಿ ಇವರ ಚಾಕಚಕ್ಯ ಮನವೊಲಿಸುವ ಸಾಮಥ್ರ್ಯ ಮತ್ತು ರಾಜತಂತ್ರಜ್ಞತೆಗಳ ಪರೀಕ್ಷೆಯಾಯಿತು. ಭಾರತ ಒಕ್ಕೂಟದಲ್ಲಿ ದೇಶೀಯ ಸಂಸ್ಥಾನಗಳ ವಿಲೀನದ ಜಟಿಲ ಸಮಸ್ಯೆಯನ್ನು ಇವರು ಎದುರಿಸಬೇಕಾಗಿ ಬಂತು. ಪಟೇಲರು ಚಾಣಾಕ್ಷತೆಯಿಂದ ಅದನ್ನು ಪರಿಹರಿಸಿ ಒಂದು ವರ್ಷಕ್ಕೂ ಕಡಿಮೆ ಅವಧಿಯಲ್ಲಿ 562 ಸಂಸ್ಥಾನಗಳನ್ನು 26 ಆಡಳಿತ ಗುಂಪುಗಳಿಗೆ ಇಳಿಸಿ, ಅವುಗಳ ಸುಮಾರು 8 ಕೋಟಿ ಪ್ರಜೆಗಳಿಗೆ ಪ್ರಜಾಪ್ರಭುತ್ವ ಲಭ್ಯವಾಗುವಂತೆ ಮಾಡಿದರು. ಇದು ಇವರ ಜೀವನದ ಅತ್ಯಂತ ಮಹತ್ತ್ವದ ಸಾಧನೆಯೆನ್ನಬಹುದು. ಭೀಕರವಾಗುತ್ತಿದ್ದ ಹೈದರಾಬಾದ್ ಸಂಸ್ಥಾನ ಸಮಸ್ಯೆಯನ್ನು ಪೋಲಿಸ್ ಕಾರ್ಯಾಚರಣೆಯ ಮೂಲಕ ಬಗೆಹರಿಸಿ ಅದನ್ನೂ ಭಾರತದಲ್ಲಿ ವಿಲೀನಗೊಳಿಸಿದ್ದು ಪಟೇಲರ ಧೈರ್ಯ ಸಾಹಸಗಳ ಪ್ರತೀಕವಾಗಿದೆ.

	ಸರ್ದಾರರು ಗೃಹ ಮಂತ್ರಿಯಾಗಿ, ಇತಿಹಾಸದಲ್ಲೇ ಹಿಂದೆಂದೂ ಕಂಡಿರದ ಕೋಮುವಾರು ಕಲಹ ಗಲಭೆಗಳಿಂದ ತತ್ತರಿಸಿ ಹೋಗಿದ್ದ ದೇಶದಲ್ಲಿ ಸುವ್ಯವಸ್ಥೆ ಮತ್ತು ಶಾಂತಿ ಹಿಂದಿರುಗುವುದಕ್ಕೆ ಕಾರಣರಾದರು. ಇದನ್ನು ಇವರು ಪ್ರಚಂಡ ಆಡಳಿತಗಾರನಂತೆ ನಿರ್ದಾಕ್ಷಿಣ್ಯವಾಗಿ ದಕ್ಷತೆಯಿಂದ ಸಾಧಿಸಿದರು. ಪಾಕಿಸ್ತಾನದಿಂದ ಬಂದ ನಿರಾಶ್ರಿತರ ಬೃಹದ್ಸಮಸ್ಯೆಯನ್ನು ದಿಟ್ಟತನ ಮತ್ತು ದೂರದೃಷ್ಟಿಗಳಿಂದ ಪರಿಹರಿಸಿದರು. ಬ್ರಿಟಿಷರು ಬಿಟ್ಟು ಹೋದ ಮೇಲೆ ಅವ್ಯವಸ್ಥೆಗೆ ಒಳಗಾಗಿದ್ದ ಸಾರ್ವಜನಿಕ ಸೇವಾ ವ್ಯವಸ್ಥೆಯನ್ನು ಸುವ್ಯವಸ್ಥಿತಗೊಳಿಸಿದರು. ಭಾರತದ ನವ ಪ್ರಜಾಪ್ರಭುತ್ವಕ್ಕೆ ಸುವ್ಯವಸ್ಥೆಯ ತಳಹದಿಯನ್ನೊದಗಿಸುವ ಉದ್ದೇಶದಿಂದ ಹೊಸ ಭಾರತೀಯ ಆಡಳಿತ ಸೇವೆಯನ್ನು ಅಸ್ತಿತ್ವದಲ್ಲಿ ತಂದರು.

	ಸ್ವಾತಂತ್ರ್ಯ ಸಾಧನೆಗೆ ಅವಶ್ಯವಾಗಿದ್ದ ಕಾರ್ಯಕ್ರಮವನ್ನು ಗಾಂಧಿಯವರು ಕಾಂಗ್ರೆಸ್ಸಿಗೆ ಹಾಕಿಕೊಟ್ಟಿದ್ದರು. ಆ ಕಾರ್ಯಕ್ರಮವನ್ನು ಸುವ್ಯವಸ್ಥಿತ ರೀತಿಯಲ್ಲಿ ಆಚರಣೆಯಲ್ಲಿ ತರುವುದಕ್ಕೆ ಸ್ವಾತಂತ್ರ್ಯದ ಹೋರಾಟಕ್ಕೆ ಶಕ್ತಿಯುತವಾಗಿ ಸಜ್ಜಾಗುವುದಕ್ಕೆ ಸಂಸ್ಥೆಯನ್ನು ಬಲಪಡಿಸಿದವರಲ್ಲಿ ಸರ್ದಾರರು ಪ್ರಮುಖರು. ದೇಶಕ್ಕಾಗಿ ಸರ್ವತ್ಯಾಗ ಮಾಡಿದ ಇವರು ಭಾರತೀಯ ಸ್ವಾತಂತ್ರ್ಯದ ಮುಖ್ಯ ಶಿಲ್ಪಿ ಹಾಗೂ ರಕ್ಷಕರಲ್ಲೊಬ್ಬರು. ಅದನ್ನು ಭದ್ರಪಡಿಸುವುದರಲ್ಲಿ ಇವರ ಕೊಡುಗೆ ಅನುಪಮವಾದ್ದು. ಗಾಂಧೀಜಿ ಸ್ವರಾಜ್ಯದ ಯೋಜಕರಾದರೆ ಸರ್ದಾರರು ಜಕ್ಕಣಾಚಾರ್ಯರು. ಸಂಘಟನಾಶಕ್ತಿ, ಜನತೆಯ ಇಂಗಿತವನ್ನು ಅರಿತುಕೊಳ್ಳುವ ಅಂತರ್ಭೋಧೆ ಇವು ಪಟೇಲರಿಗೆ ಈ ಕಾರ್ಯದಲ್ಲಿ ಸಹಾಯಕವಾದವು. 1950ರ ಡಿಸೆಂಬರ್ 15 ರಂದು ಸರ್ದಾರರು ಮುಂಬಯಿಯಲ್ಲಿ ಕಾಲವಾದರು.

	ಸರ್ದಾರರನ್ನು ಉಕ್ಕಿನ ಮನುಷ್ಯ ಎನ್ನಲಾಗಿದೆ. ಡಂಭಾಚಾರ, ಬಾಯಿ ಬಡುಕತನಗಳಿಂದ ಇವರು ದೂರವಾಗಿದ್ದರು. ಇವರು ಖಂಡಿತವಾದಿ, ಸರಳ, ಸಾಚಾ ಆಗಿದ್ದರು. ಹೊರಚರ್ಯೆ ಗಡಸು ಮತ್ತು ಗಂಭೀರವಾಗಿದ್ದರೂ ಅಶಿಕ್ಷಿತರ ಹಾಗೂ ಬಡವರ ಬಗ್ಗೆ ಅಂತರಂಗದಲ್ಲಿ ಇವರಿಗೆ ಕರುಣೆಯಿತ್ತು. ಯಾವುದಾದರೂ ಒಂದು ಕೆಲಸಕ್ಕೆ ಮನಸ್ಸು ಮಾಡಿದರೆ ಅದನ್ನು ಸಾಧಿಸಿಯೇ ತೀರಬೇಕೆಂಬ ಹಠ ಇವರದು. ಸರ್ದಾರರ ದಾರಿಯಲ್ಲಿ ಯಾರಾದರೂ ಅಡ್ಡ ಬಂದರೆ ಅವರಿಗೆ ದೇವರೇ ಗತಿ ಎಂದು ಗಾಂಧೀಜೀ ಹೇಳುತ್ತಿದ್ದರು.

	ಗ್ರಾಮೋದ್ಯೋಗಗಳನ್ನು ಅಭಿವೃದ್ಧಿಗೊಳಿಸುವುದರಲ್ಲಿ ನಿಜವಾದ ಸಮಾಜವಾದವಿದೆ ಎಂಬುದು ಇವರ ಮತವಾಗಿತ್ತು. ಬೃಹತ್ಪ್ರಮಾಣದ ಉತ್ಪಾದನೆಯಿಂದ ಪಾಶ್ಚಾತ್ಯ ದೇಶಗಳಲ್ಲಿ ತಲೆದೋರಿದುವ ಅವ್ಯವಸ್ಥೆಯ ವಿದ್ಯಮಾನಗಳನ್ನು ನಮ್ಮ ದೇಶದಲ್ಲಿ ನಾವು ಉಂಟುಮಾಡಬಯಸುವುದಿಲ್ಲ ಎಂದು ಅಹಮ್ಮದಾಬಾದಿನಲ್ಲಿ 1935ರ ಜನವರಿ 1ರಂದು ಭಾಷಣದಲ್ಲಿ ಇವರು ಹೇಳಿದ್ದರು.

	ಸರ್ದಾರರು ಶ್ರೀಮಂತಿಕೆಯಲ್ಲಿ ಹುಟ್ಟಲಿಲ್ಲ. ಇವರ ಮನೆತನ ಪಂಡಿತರದಾಗಿರಲಿಲ್ಲ. ಆದರೂ ಇವರು ಸ್ವ ಪ್ರಯತ್ನದಿಂದ ಪ್ರತಿಕೂಲ ಪರಿಸ್ಥಿತಿಗಳನ್ನು ಯಶಸ್ವಿಯಾಗಿ ಜಯಿಸಿ ದೇಶದ ಅಗ್ರಗಣ್ಯ ವ್ಯಕ್ತಿಗಳಲೊಬ್ಬರಾದರು. ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಇವರ ಸ್ಥಾನ ಶಾಶ್ವತವಾದ್ದು.								  (ಜಿ.ಕೆ.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ